ಹವ್ಯಾಸ
-	ವಿರಾಮದ ವೇಳೆಯಲ್ಲಿ ವ್ಯಕ್ತಿ ಯಾದೃಚ್ಛಿಕವಾಗಿ ಕ್ರಿಯೆಯೊಂದರಲ್ಲಿ ತನ್ನನ್ನು ಪದೇ ಪದೇ ತೊಡಗಿಸಿಕೊಳ್ಳುವ ಚಟುವಟಿಕೆ (ಹ್ಯಾಬಿಟ್). ಸಾಮಾನ್ಯವಾಗಿ ಜನರು ದೈಹಿಕ-ಮಾನಸಿಕ ವಿಶ್ರಾಂತಿಗಾಗಿ, ಸ್ನೇಹ ಸಂಪಾದನೆಗಾಗಿ ಮತ್ತು ಹೊಸ ಹೊಸ ಅಭಿರುಚಿ, ಆಸಕ್ತಿಗಳ ಬೆಳೆವಣಿಗೆಗಾಗಿ ವಿವಿಧ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದ ದೈಹಿಕ-ಮಾನಸಿಕ ನೆಮ್ಮದಿಯೊದಗಿ ವ್ಯಕ್ತಿತ್ವದ ಬೆಳೆವಣಿ ಗೆಯೂ ಸಾಧ್ಯವಾಗುತ್ತದೆ. ಕೆಲವೊಮ್ಮೆ ಆರ್ಥಿಕ ಲಾಭತರುವ ಹವ್ಯಾಸ ಗಳು ವೃತ್ತಿಗಳಾಗಿ ಮಾರ್ಪಡಬಹುದು. ನಿತ್ಯ ಜೀವನದ ಬಹುಪಾಲು ಕ್ರಿಯೆಗಳು ಹವ್ಯಾಸಗಳೇ ಆಗಿರಬಹುದು. ಸಹಜವಾಗಿ ನಡೆಯುವ ಕ್ರಿಯೆ ಕೂಡ ಹವ್ಯಾಸವೆಂದು ಹೇಳಲಾಗುತ್ತದೆ. ಚಿಂತನಾ ರಹಿತನಾಗಿ ತೊಡಗಿಸಿಕೊಳ್ಳುವ ಪ್ರವೃತ್ತಿ ಹವ್ಯಾಸವಾಗಬಹುದು. ಇವು ಹುಟ್ಟಿನಿಂದ ಬಂದ ಸ್ವಭಾವಗಳಲ್ಲ. ವಯಸ್ಸಿನ ನಿರ್ಬಂಧವೂ ಇವಕ್ಕೆ ಇರುವುದಿಲ್ಲ. 

	ವಿವಿಧ ಕೌಶಲಗಳು ಹುಟ್ಟಿನಿಂದಲೇ ಮನುಷ್ಯನಲ್ಲಿ ಇರುತ್ತವೆ. ಅವುಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ-ಅಭಿಪ್ರೇರಣೆಗಳು ಅಗತ್ಯ. ಅದು ಸಿಕ್ಕಿದಲ್ಲಿ ಆ ಕೌಶಲಗಳನ್ನೇ ಹವ್ಯಾಸಗಳನ್ನಾಗಿ ಪರಿವರ್ತಿಸಿ ಕೊಳ್ಳಬಹುದು. ಬಹುಕಾಲ ಮಾನಸಿಕ ಅಥವಾ ದೈಹಿಕ ಕೆಲಸವನ್ನು ನಿರಂತರವಾಗಿ ನಿರ್ವಹಿಸುತ್ತಿದ್ದರೆ ಆಯಾಸ ಉಂಟಾಗುತ್ತದೆ. ಕಾರ್ಯದಕ್ಷತೆಯ ಪ್ರಮಾಣ ಮತ್ತು ಗುಣಮಟ್ಟ ಕುಸಿಯುತ್ತದೆ. ಇಂಥ ಸಂದರ್ಭಗಳಲ್ಲಿ ವಿರಾಮದ ಅಗತ್ಯವಿರುತ್ತದೆ. ಹವ್ಯಾಸಗಳು ಇಂಥ ವೇಳೆ ವಿರಾಮ ನೀಡಬಲ್ಲವು. 

	ಆಸಕ್ತಿಗಳಿಗೆ ಅನುಗುಣವಾಗಿ ಹವ್ಯಾಸ ಭಿನ್ನವಾಗುತ್ತವೆ. ಇದು ವ್ಯಕ್ತಿಗತವಾದದು, ಸ್ವಯಂ ಪ್ರೇರಿತವಾದುದು. ಬೇರೊಬ್ಬರ ಬಲವಂತಕ್ಕೆ ಹವ್ಯಾಸಗಳು ಬೆಳೆಯಲಾರವು. ಇವು ವ್ಯಕ್ತಿಯ ಬೆಳೆವಣಿಗೆ ಮತ್ತು ವರ್ತನೆಯನ್ನು ನಿರ್ದೇಶಿಸುತ್ತವೆ. ವ್ಯಕ್ತಿ ಹವ್ಯಾಸಗಳನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ - ವ್ಯಕ್ತಿತ್ವ ವಿಕಾಸ ಮಾನಸಿಕ ಮತ್ತು ದೈಹಿಕ ಆಯಾಸ ಪರಿಹಾರ, ಮಾನಸಿಕ ಚಿಕಿತ್ಸೆ, ಔದ್ಯೋಗಿಕ ಚಿಕಿತ್ಸೆ ಇತ್ಯಾದಿ.

	ಲಘು ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಸುಧಾರಿಸಿ ಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ. ಹವ್ಯಾಸದಲ್ಲಿ ತೊಡಗಿರು ವಷ್ಟು ಕಾಲ ಸಮಸ್ಯೆಯ ಅರಿವು ಇರುವುದಿಲ್ಲ. ಮನಸ್ಸಿನಲ್ಲಿ ಉಂಟಾದ ವಿಕರ್ಷಣೆಯಿಂದಾಗಿ ಸಮಾಧಾನ ಪಡೆಯಲು ಸಾಧ್ಯವಾಗುತ್ತದೆ. ಹಾಸಿಗೆ ಹಿಡಿದು ಮಲಗಿದ ರೋಗಿಗಳು ಸಹ ಕೆಲವು ಹವ್ಯಾಸಗಳನ್ನು ರೂಢಿಸಿಕೊಂಡು ತಮ್ಮ ಕಾಯಿಲೆಯ ತಾಪವನ್ನು ತಾತ್ಕಾಲಿಕವಾಗಿ ಮರೆಯುವುದೂ ಇದೆ. ಈ ದೃಷ್ಟಿಯಿಂದ ಹವ್ಯಾಸ ಒಂದು ಚಿಕಿತ್ಸಾ ವಿಧಾನವೂ ಹೌದು. ಮನೋವಿಜ್ಞಾನಿಗಳು ಹವ್ಯಾಸಗಳನ್ನು ಒಂದು ಚಿಕಿತ್ಸಾ ಕ್ರಮವಾಗಿ ಬಳಸುತ್ತಾರೆ. ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಆರೋಗ್ಯಕರ ಹವ್ಯಾಸ ಮತ್ತು ಮನರಂಜನೆಯಲ್ಲಿ ವ್ಯಕ್ತಿ ತೊಡಗಿಸಿಕೊಂಡರೆ ಮೈಮನಸ್ಸುಗಳಿಗೆ ಸಂತೋಷ, ಸಮಾಧಾನ ಹಾಗೂ ಸಂತೃಪ್ತಿ ಉಂಟಾಗುತ್ತದೆ ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ. 

	ವ್ಯಕ್ತಿಯಲ್ಲಿ ಹವ್ಯಾಸಗಳು ಹೇಗೆ ಬೆಳೆಯುತ್ತವೆಂಬ ಪ್ರಶ್ನೆಗೆ ಹಲವಾರು ಉತ್ತರಗಳಿವೆ. ವ್ಯಕ್ತಿ ಅಪ್ರಜ್ಞಾಪೂರ್ವಕವಾಗಿ ಒಂದು ಕ್ರಿಯೆಯಲ್ಲಿ ತೊಡಗುತ್ತಾನೆ. ಅನಂತರ ಇದು ವ್ಯಕ್ತಿಯನ್ನು ಆಕ್ರಮಿಸುತ್ತದೆ; ಅದು ವ್ಯಕ್ತಿಯ ನಿತ್ಯಜೀವನದ ಭಾಗವಾಗುತ್ತದೆ. ಇದಕ್ಕೆ ತಕ್ಕ ಪರಿಸರ, ಕಾಲ, ಅನುಕೂಲ ಮುಂತಾದವನ್ನು ವ್ಯಕ್ತಿಯೇ ಒದಗಿಸಲು ಮುಂದಾಗುತ್ತಾನೆಂಬ ಒಂದು ಅಭಿಪ್ರಾಯವಿದೆ. 

	ಹವ್ಯಾಸಗಳನ್ನು ಐದು ರೀತಿಗಳಲ್ಲಿ ವರ್ಗೀಕರಿಸಬಹುದು ; ಇವು ಪರಸ್ಪರ ಪೂರಕವಾಗಿರುತ್ತವೆ:

	1. ಕಲೆ : ಇದು ನೃತ್ಯ, ನಾಟಕ, ಸಂಗೀತ, ಚಿತ್ರಕಲೆ, ರೇಖಾ ಚಿತ್ರ ರಚನೆ, ಸಾಹಿತ್ಯ ರಚನೆ ಮುಂತಾದ ರೀತಿಗಳಲ್ಲಿರಬಹುದು. ಇದು ತನ್ನದೇ ಆದ ಬೇರೆ ಬೇರೆ ಸಾಮಥ್ರ್ಯ, ಸಾಧ್ಯತೆ ಹಾಗೂ ಎಲ್ಲೆಯನ್ನು ಹೊಂದಿದೆ. ಉದಾಹರಣೆಗೆ ಶಾಸ್ತ್ರೀಯ, ಜನಪದಸಂಗೀತ, ವಾದ್ಯ, ಭಾವಗೀತೆ ಮುಂತಾದ ರೀತಿಯಲ್ಲಿ ಸಂಗೀತ ವಿಸ್ತರಿಸಬಹುದು. ಪಾಶ್ಚಾತ್ಯ ಸಂಗೀತ ಕೇಳುವುದು, ಹಾಡುವುದು, ಸಂಗೀತ ವಾದ್ಯನುಡಿಸುವುದು - ಇವು ಅಭಿವ್ಯಕ್ತಿಯ ಮಾಧ್ಯಮಗಳೂ ಆಗಬಹುದು. 

	2. ಸಂಗ್ರಹಣೆ : ಇದು ಸ್ಟಾಂಪು, ವಿವಿಧ ದೇಶದ ನಾಣ್ಯ, ನೋಟು, ಪುಸ್ತಕ, ಪ್ರಾಚ್ಯವಸ್ತು, ಗೊಂಬೆ, ಪ್ರಾಕೃತಿಕ ವಸ್ತು, ಪ್ರತಿಷ್ಠಿತ ವ್ಯಕ್ತಿಗಳ ಹಸ್ತಾಕ್ಷರ ಮುಂತಾದವುಗಳ ಸಂಗ್ರಹಕ್ಕೆ ಸಂಬಂಧಿಸಿರಬಹುದು. 

	3. ಕರಕೌಶಲ : ಕೆತ್ತನೆ ಕೆಲಸ, ಹೊಲಿಗೆ, ಕಸೂತಿ, ಬುಟ್ಟಿಹೆಣೆಯು ವುದು, ಸ್ವೆಟರ್ ಹೆಣೆಯುವುದು, ದಾರದಿಂದ ಚಿತ್ತಾರಗಳನ್ನು ಬಿಡಿಸುವುದು ಮುಂತಾದುವು ಈ ಗುಂಪಿನಲ್ಲಿ ಸೇರುತ್ತವೆ. ಕಚ್ಚಾ ವಸ್ತುಗಳನ್ನು ಬಳಸಿ ಆಟದ ಸಾಮಗ್ರಿ, ದೋಣಿ, ರೈಲುಗಾಡಿ, ವಿಮಾನ ಮುಂತಾದವುಗಳ ಮಾದರಿ ತಯಾರಿ, ಕೃತಕ ಹೂ ಮುಂತಾದವುಗಳ ತಯಾರಿ ಈ ಗುಂಪಿಗೆ ಸೇರುತ್ತವೆ. 

	4. ಕ್ರೀಡೆ : ಮನೋದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಗುಂಪಿನಲ್ಲಿ ಪರ್ವತಾರೋಹಣ, ಸ್ಕೇಟಿಂಗ್, ಟೆನ್ನಿಸ್, ಚೆಂಡಾಟ, ಚದುರಂಗ, ಇಸ್ಪೀಟು, ವ್ಯಾಯಾಮ ಮುಂತಾದವು ಸೇರುತ್ತವೆ.

	5. ಇತರೆ ಹವ್ಯಾಸಗಳು : ಅಡುಗೆ, ಒಳಾಂಗಣ ಅಲಂಕರಣ, ಛಾಯಾಚಿತ್ರಣ, ತೋಟಗಾರಿಕೆ ಮುಂತಾದ ಸಂಕೀರ್ಣ ಸ್ವರೂಪದ ಪ್ರವೃತ್ತಿಗಳನ್ನು ಈ ಗುಂಪಿನಲ್ಲಿ ಸೇರಿಸಬಹುದು. 

	ಹವ್ಯಾಸಗಳಲ್ಲಿ ಒಳ್ಳೆಯ ಹಾಗೂ ಕೆಟ್ಟ ಹವ್ಯಾಸಗಳೆಂಬ ವರ್ಗೀಕರಣವಿದೆ. ಇತರರಿಗೆ ಮುದ ನೀಡುವ, ತೊಂದರೆ ಕೊಡದ, ಅವರು ನಿರೀಕ್ಷಿಸುವ ಹವ್ಯಾಸಗಳು ಸಾಮಾನ್ಯವಾಗಿ ಒಳ್ಳೆಯ ವೆನಿಸಿಕೊಳ್ಳುತ್ತವೆ; ಇತರರಿಗೆ ಕಿರಿಕಿರಿಯಾಗುವಂಥವು, ತೊಂದರೆ ಕೊಡುವಂಥವು ಕೆಟ್ಟ ವೆನಿಸಿಕೊಳ್ಳುತ್ತವೆ. ವ್ಯಕ್ತಿ ಸ್ವಸಂತೋಷಕ್ಕಾಗಿ ಕೆಲವೊಂದು ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇವುಗಳಿಂದ ಸಂತಸ ದೊರಕಲಾರದೆಂದು ಮನವರಿಕೆಯಾದಾಗ ಆತ ಅವನ್ನು ತ್ಯಜಿಸಬಹುದು. ವ್ಯಕ್ತಿಯ ವರ್ತನಾ ಸಾಧ್ಯತೆಯನ್ನು ಇವು  ತೋರಿಸುತ್ತವೆ. ಹವ್ಯಾಸವಾಗಿ ಆರಂಭವಾದ ಯಾವುದೇ ಒಂದು ವಿಚಾರ ಕೆಲವೊಮ್ಮೆ ಚಟವೂ ಆಗಿಬಿಡಬಹುದು. ಚಟ ವಾದಾಗ ಅದು ಹವ್ಯಾಸವಾಗಿ ಉಳಿಯುವುದಿಲ್ಲ. ಅಂಥ ಸಂದರ್ಭದಲ್ಲಿ ಚಟ ದಿಂದ ಬಿಡುಗಡೆ ಹೊಂದಲು ವ್ಯಕ್ತಿ ಬಹಳ ಪರಿಶ್ರಮಪಡಬೇಕಾಗುತ್ತದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ					
				(ಕೆ.ಎನ್.ಎಲ್.)